ನಾನು ನನ್ನ ದಾಸನು ನನ್ನ ಬಗ್ಗೆ ಹೇಗೆ ಯೋಚಿಸುತ್ತಾನೋ ಹಾಗೆ ಇರುತ್ತೇನೆ. ಅವನು ನನ್ನನ್ನು ನೆನಪಿಸಿಕೊಂಡಾಗ ನಾನು ಅವನೊಂದಿಗೆ…

ನಾನು ನನ್ನ ದಾಸನು ನನ್ನ ಬಗ್ಗೆ ಹೇಗೆ ಯೋಚಿಸುತ್ತಾನೋ ಹಾಗೆ ಇರುತ್ತೇನೆ. ಅವನು ನನ್ನನ್ನು ನೆನಪಿಸಿಕೊಂಡಾಗ ನಾನು ಅವನೊಂದಿಗೆ ಇರುತ್ತೇನೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನಾನು ನನ್ನ ದಾಸನು ನನ್ನ ಬಗ್ಗೆ ಹೇಗೆ ಯೋಚಿಸುತ್ತಾನೋ ಹಾಗೆ ಇರುತ್ತೇನೆ. ಅವನು ನನ್ನನ್ನು ನೆನಪಿಸಿಕೊಂಡಾಗ ನಾನು ಅವನೊಂದಿಗೆ ಇರುತ್ತೇನೆ. ಅವನು ನನ್ನನ್ನು ಮನಸ್ಸಿನಲ್ಲಿ ನೆನಪಿಸಿಕೊಂಡರೆ, ನಾನು ಅವನನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತೇನೆ. ಅವನು ನನ್ನನ್ನು ಒಂದು ಗುಂಪಿನಲ್ಲಿ ನೆನಪಿಸಿಕೊಂಡರೆ, ನಾನು ಅವನನ್ನು ಅದಕ್ಕಿಂತಲೂ ಉತ್ತಮವಾದ ಗುಂಪಿನಲ್ಲಿ ನೆನಪಿಸಿಕೊಳ್ಳುತ್ತೇನೆ. ಅವನು ನನ್ನ ಕಡೆಗೆ ಒಂದು ಗೇಣಿನ ಅಂತರದಷ್ಟು ಹತ್ತಿರವಾದರೆ, ನಾನು ಅವನ ಕಡೆಗೆ ಒಂದು ಮೊಳಕೈ ಅಂತರದಷ್ಟು ಹತ್ತಿರವಾಗುತ್ತೇನೆ. ಮತ್ತು ಅವನು ನನ್ನ ಕಡೆಗೆ ಒಂದು ಮೊಳಕೈ ಅಂತರದಷ್ಟು ಹತ್ತಿರವಾದರೆ, ನಾನು ಅವನ ಕಡೆಗೆ ಒಂದು ಬಾವು (ಎರಡು ಕೈಗಳನ್ನು ಅಗಲಿಸಿದಾಗ ಉಂಟಾಗುವ ಅಳತೆ) ಅಂತರದಷ್ಟು ಹತ್ತಿರವಾಗುತ್ತೇನೆ. ಅವನು ನನ್ನ ಬಳಿಗೆ ನಡೆದುಕೊಂಡು ಬಂದರೆ, ನಾನು ಅವನ ಬಳಿಗೆ ಓಡುತ್ತಾ ಬರುತ್ತೇನೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಾನು ನನ್ನ ದಾಸನು ನನ್ನ ಬಗ್ಗೆ ಹೇಗೆ ಯೋಚಿಸುತ್ತಾನೋ ಹಾಗೆ ಇರುತ್ತೇನೆ. ಅಂದರೆ, ನಾನು ನನ್ನ ದಾಸನೊಂದಿಗೆ ಅವನು ನನ್ನ ಬಗ್ಗೆ ಹೊಂದಿರುವ ನಿರೀಕ್ಷೆಗೆ ಅನುಗುಣವಾಗಿ, ಅಂದರೆ, ಅವನು ನನ್ನ ಬಗ್ಗೆ ಇಟ್ಟಿರುವ ಭರವಸೆ ಮತ್ತು ಕ್ಷಮೆಯ ನಿರೀಕ್ಷೆಯಂತೆ ವರ್ತಿಸುತ್ತೇನೆ. ಅವನು ನನ್ನಿಂದ ಒಳಿತನ್ನು ಅಥವಾ ಬೇರೆ ಏನನ್ನು ನಿರೀಕ್ಷಿಸುತ್ತಾನೋ ಅದರಂತೆ ನಾನು ಅವನೊಂದಿಗೆ ನಡೆದುಕೊಳ್ಳುತ್ತೇನೆ. ಅವನು ನನ್ನನ್ನು ನೆನಪಿಸಿಕೊಳ್ಳುವಾಗ ನಾನು ಕರುಣೆ, ಯಶಸ್ಸಿಗಿರುವ ಮಾರ್ಗದರ್ಶನ, ಸನ್ಮಾರ್ಗ ನಿರ್ದೇಶನ, ಕಾಳಜಿ ಮತ್ತು ಬೆಂಬಲದ ಮೂಲಕ ಅವನೊಂದಿಗೆ ಇರುತ್ತೇನೆ. ಅವನು ನನ್ನನ್ನು ಮನಸ್ಸಿನಲ್ಲಿ, ಒಂಟಿಯಾಗಿ ಮತ್ತು ಏಕಾಂತದಲ್ಲಿ, ತಸ್ಬೀಹ್ ತಹ್ಲೀಲ್ ಮುಂತಾದವುಗಳ ಮೂಲಕ ನೆನಪಿಸಿಕೊಂಡರೆ; ನಾನು ಕೂಡ ಅವನನ್ನು ನನ್ನ ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತೇನೆ. ಅವನು ನನ್ನನ್ನು ಒಂದು ಗುಂಪಿನಲ್ಲಿ ನೆನಪಿಸಿಕೊಂಡರೆ; ನಾನು ಅವನನ್ನು ಅವರ ಗುಂಪಿಗಿಂತ ದೊಡ್ಡದಾದ ಮತ್ತು ಹೆಚ್ಚು ಶ್ರೇಷ್ಠವಾದ ಗುಂಪಿನಲ್ಲಿ ನೆನಪಿಸಿಕೊಳ್ಳುತ್ತೇನೆ. ಯಾರು ಅಲ್ಲಾಹನ ಕಡೆಗೆ ಒಂದು ಗೇಣಿನ ಅಂತರದಷ್ಟು ಹತ್ತಿರವಾಗುತ್ತಾನೋ, ಅಲ್ಲಾಹು ಅವನಿಗೆ ಒಂದು ಮೊಳಕೈ ಅಂತರದಷ್ಟು ಹೆಚ್ಚು ಹತ್ತಿರವಾಗುತ್ತಾನೆ. ಅವನು ಅಲ್ಲಾಹನ ಕಡೆಗೆ ಒಂದು ಮೊಳಕೈ ಅಂತರದಷ್ಟು ಹತ್ತಿರವಾದರೆ, ಅಲ್ಲಾಹು ಅವನ ಕಡೆಗೆ ಒಂದು ಬಾವು ಅಂತರದಷ್ಟು ಹತ್ತಿರವಾಗುತ್ತಾನೆ. ಅವನು ಅಲ್ಲಾಹನ ಬಳಿಗೆ ನಡೆದುಕೊಂಡು ಬಂದರೆ, ಅಲ್ಲಾಹು ಅವನ ಬಳಿಗೆ ಓಡುತ್ತಾ ಬರುತ್ತಾನೆ. ಆದ್ದರಿಂದ, ದಾಸನು ತನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ವಿಧೇಯತೆಯೊಂದಿಗೆ ಹತ್ತಿರವಾದಾಗ, ಕರ್ಮದ ರೀತಿಯಲ್ಲೇ ಇರುವ ಪ್ರತಿಫಲಕ್ಕೆ ಅನುಗುಣವಾಗಿ ಅಲ್ಲಾಹು ಅವನ ಕಡೆಗಿರುವ ತನ್ನ ಸಾಮೀಪ್ಯವನ್ನು ಹೆಚ್ಚಿಸುತ್ತಾನೆ. ಹೀಗೆ, ತನ್ನ ಪರಿಪಾಲಕನಿಗಿರುವ ಸತ್ಯವಿಶ್ವಾಸಿಯ ದಾಸ್ಯತ್ವವು ಪರಿಪೂರ್ಣವಾದಂತೆ, ಅಲ್ಲಾಹು ಅವನಿಗೆ ಹತ್ತಿರವಾಗುತ್ತಾ ಇರುತ್ತಾನೆ. ಏಕೆಂದರೆ, ಅಲ್ಲಾಹನ ಕೊಡುಗೆ ಮತ್ತು ಪ್ರತಿಫಲವು ದಾಸನು ಮಾಡುವ ಕೆಲಸ-ಕಾರ್ಯಗಳಿಗಿಂತ ದೊಡ್ಡದಾಗಿದೆ. ಒಟ್ಟಿನಲ್ಲಿ, ಅಲ್ಲಾಹನ ಪ್ರತಿಫಲವು ಗುಣಮಟ್ಟ ಮತ್ತು ಪ್ರಮಾಣ ಎರಡರಲ್ಲೂ ಕರ್ಮಕ್ಕಿಂತ ದೊಡ್ಡದಾಗಿದೆ. ಆದ್ದರಿಂದ, ಸತ್ಯವಿಶ್ವಾಸಿಯು ಅಲ್ಲಾಹನನ್ನು ಭೇಟಿಯಾಗುವ ವರೆಗೂ ಅವನ ಬಗ್ಗೆ ಉತ್ತಮ ನಿರೀಕ್ಷೆಯನ್ನಿಟ್ಟು ಕರ್ಮವೆಸಗುತ್ತಾನೆ ಮತ್ತು ಸತ್ಕರ್ಮಗಳಿಗಾಗಿ ತ್ವರೆ ಮಾಡುತ್ತಾನೆ ಹಾಗೂ ಹೆಚ್ಚಿಸುತ್ತಾನೆ.

فوائد الحديث

ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ವರದಿ ಮಾಡುವ ಹದೀಸ್‌ಗಳಲ್ಲಿ ಒಂದಾಗಿದೆ. ಇದನ್ನು ಹದೀಸ್ ಕುದ್ಸಿ (ಪವಿತ್ರ ಹದೀಸ್) ಅಥವಾ ಹದೀಸ್ ಇಲಾಹಿ (ದೈವಿಕ ಹದೀಸ್) ಎಂದು ಕರೆಯಲಾಗುತ್ತದೆ. ಇದರರ್ಥ ಇದರ ಪದಗಳು ಮತ್ತು ಅರ್ಥವು ಅಲ್ಲಾಹನಿಂದಾಗಿವೆ. ಆದರೆ ಇದು ಕುರ್‌ಆನನ್ನು ಇತರ ವಚನಗಳಿಂದ ಬೇರ್ಪಡಿಸುವ ವೈಶಿಷ್ಟ್ಯಗಳನ್ನು ಹೊಂದಿಲ್ಲ. ಉದಾಹರಣೆಗೆ, ಕುರ್‌ಆನಿನಂತೆ ಇದನ್ನು ಪಠಿಸುವುದು ಆರಾಧನೆಯಲ್ಲ, ಇದನ್ನು ಸ್ಪರ್ಶಿಸಲು ಶುದ್ಧಿಯ ಅಗತ್ಯವಿಲ್ಲ, ಇದರಂತಹದನ್ನು ರಚಿಸುವ ಸವಾಲಿಲ್ಲ ಮತ್ತು ಇದಕ್ಕೆ ಪವಾಡಗಳಿಲ್ಲ."

ಆಜುರ್‍ರಿ ಹೇಳಿದರು: “ಖಂಡಿತವಾಗಿಯೂ, ಸತ್ಯದ ಜನರು ಅಲ್ಲಾಹನನ್ನು ಅವನು ಸ್ವತಃ ತನ್ನನ್ನು ಬಣ್ಣಿಸಿದಂತೆ, ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು ಬಣ್ಣಿಸಿದಂತೆ, ಮತ್ತು ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವನನ್ನು ಬಣ್ಣಿಸಿದಂತೆ ಬಣ್ಣಿಸುತ್ತಾರೆ. ಇದು (ಕುರ್‌ಆನ್ ಮತ್ತು ಸುನ್ನತ್ತನ್ನು) ಅನುಸರಿಸಿದ ಮತ್ತು ಹೊಸ ಆವಿಷ್ಕಾರಗಳನ್ನು ಮಾಡದ ವಿದ್ವಾಂಸರ ಮಾರ್ಗವಾಗಿದೆ.” ಆದ್ದರಿಂದ, ಅಹ್ಲುಸ್ಸುನ್ನದ ಜನರು ಅಲ್ಲಾಹು ಅವನಿಗಾಗಿ ದೃಢೀಕರಿಸಿದ ಹೆಸರುಗಳು ಮತ್ತು ಗುಣಲಕ್ಷಣಗಳನ್ನು ವಿರೂಪಗೊಳಿಸದೆ, ನಿಷ್ಕ್ರಿಯಗೊಳಿಸದೆ, ವಿಧಾನವನ್ನು ಅನ್ವೇಷಿಸದೆ ಅಥವಾ ಮಾನವರಿಗೆ ಹೋಲಿಸದೆ ದೃಢೀಕರಿಸುತ್ತಾರೆ. ಅಲ್ಲಾಹು ಅವನಿಗಾಗಿ ನಿರಾಕರಿಸಿದ್ದನ್ನು ಅವರು ಕೂಡ ಅಲ್ಲಾಹನಿಗೆ ನಿರಾಕರಿಸುತ್ತಾರೆ. ನಿರಾಕರಣೆ ಅಥವಾ ದೃಢೀಕರಣವಿಲ್ಲದ ವಿಷಯಗಳ ಬಗ್ಗೆ ಅವರು ಮೌನವಾಗಿರುತ್ತಾರೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅವನಿಗೆ (ಅಲ್ಲಾಹನಿಗೆ) ಹೋಲಿಕೆಯಾಗಿ ಯಾವುದೂ ಇಲ್ಲ. ಅವನು ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ."

ಅಲ್ಲಾಹನ ಬಗ್ಗೆಯಿರುವ ಒಳ್ಳೆಯ ನಿರೀಕ್ಷೆಯು ಕರ್ಮದೊಂದಿಗೆ ಕೂಡಿಕೊಂಡಿರಬೇಕು. ಹಸನ್ ಬಸ್ರಿ ಹೇಳಿದರು: “ಖಂಡಿತವಾಗಿಯೂ, ಸತ್ಯವಿಶ್ವಾಸಿಯು ತನ್ನ ಪರಿಪಾಲಕನ (ಅಲ್ಲಾಹನ) ಬಗ್ಗೆ ಒಳ್ಳೆಯ ಭಾವನೆಯನ್ನಿಟ್ಟುಕೊಳ್ಳುವುದರಿಂದ ಒಳ್ಳೆಯ ಕರ್ಮಗಳನ್ನೇ ಮಾಡುತ್ತಾನೆ. ಖಂಡಿತವಾಗಿಯೂ, ಪಾಪಿಯು ತನ್ನ ಪರಿಪಾಲಕನ (ಅಲ್ಲಾಹನ) ಬಗ್ಗೆ ಕೆಟ್ಟ ಭಾವನೆಯನ್ನಿಟ್ಟುಕೊಳ್ಳುವುದರಿಂದ ಕೆಟ್ಟ ಕರ್ಮಗಳನ್ನೇ ಮಾಡುತ್ತಾನೆ."

ಕುರ್ತುಬಿ ಹೇಳಿದರು: "ಹೀಗೆ ಹೇಳಲಾಗುತ್ತದೆ: "ನನ್ನ ದಾಸನು ನನ್ನ ಬಗ್ಗೆ ನಿರೀಕ್ಷಿಸಿದಂತೆ" ಇಲ್ಲಿ ನಿರೀಕ್ಷೆ ಎಂದರೆ, ಪ್ರಾರ್ಥಿಸುವಾಗ ಉತ್ತರ ಸಿಗುವ ನಿರೀಕ್ಷೆ, ಪಶ್ಚಾತ್ತಾಪ ಪಡುವಾಗ ಅದು ಸ್ವೀಕಾರವಾಗುವ ನಿರೀಕ್ಷೆ, ಕ್ಷಮೆ ಯಾಚಿಸುವಾಗ ಕ್ಷಮೆ ದೊರೆಯುವ ನಿರೀಕ್ಷೆ, ಮತ್ತು ಅಲ್ಲಾಹನ ಸತ್ಯವಾಗ್ದಾನದಲ್ಲಿ ಬಲವಾದ ನಂಬಿಕೆಯಿಟ್ಟು ಷರತ್ತುಬದ್ಧವಾಗಿ ಆರಾಧನೆ ಮಾಡುವಾಗ ಅದಕ್ಕೆ ಪ್ರತಿಫಲ ದೊರೆಯುವ ನಿರೀಕ್ಷೆಯಾಗಿದೆ. ಆದ್ದರಿಂದ, ಒಬ್ಬ ವ್ಯಕ್ತಿಯು ಅಲ್ಲಾಹು ತನ್ನ ಕರ್ಮಗಳನ್ನು ಸ್ವೀಕರಿಸುತ್ತಾನೆ ಮತ್ತು ತನಗೆ ಕ್ಷಮಿಸುತ್ತಾನೆ ಎಂಬ ಖಾತ್ರಿಯೊಂದಿಗೆ ಕರ್ಮಗಳನ್ನು ನಿರ್ವಹಿಸಲು ಅತಿಯಾಗಿ ಪರಿಶ್ರಮಿಸಬೇಕು. ಏಕೆಂದರೆ, ಅದು ಅಲ್ಲಾಹನ ವಾಗ್ದಾನವಾಗಿದೆ ಮತ್ತು ಅವನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ. ಆದರೆ, ಕರ್ಮಗಳನ್ನು ಮಾಡುವಾಗ ಅಲ್ಲಾಹು ಅದನ್ನು ಸ್ವೀಕರಿಸುವುದಿಲ್ಲ ಮತ್ತು ಅದು ತನಗೆ ಪ್ರಯೋಜನಕಾರಿಯಲ್ಲ ಎಂದು ನಂಬಿದರೆ ಅಥವಾ ಯೋಚಿಸಿದರೆ, ಇದು ಅಲ್ಲಾಹನ ಕರುಣೆಯ ಬಗ್ಗೆ ನಿರಾಶೆ ವ್ಯಕ್ತಪಡಿಸುವುದಾಗಿದೆ. ಇದು ಮಹಾಪಾಪಗಳಲ್ಲಿ ಒಂದಾಗಿದೆ. ಈ ನಂಬಿಕೆಯ ಮೇಲೆ ಸಾಯುವ ವ್ಯಕ್ತಿಯನ್ನು ಅವನು ಏನು ಯೋಚಿಸುತ್ತಿದ್ದನೋ ಅದಕ್ಕೇ ವಹಿಸಿಕೊಡಲಾಗುವುದು. ಈ ಹದೀಸ್‌ನ ಕೆಲವು ವರದಿಗಳಲ್ಲಿ ಹೀಗೆ ವರದಿಯಾಗಿದೆ: "ಆದ್ದರಿಂದ ನನ್ನ ದಾಸನು ನನ್ನ ಬಗ್ಗೆ ಅವನಿಗೆ ಇಷ್ಟವಾದ ರೀತಿಯಲ್ಲಿ ಯೋಚಿಸಲಿ." ಇನ್ನು ಪಾಪದಲ್ಲಿ ಮುಂದುವರಿಯುತ್ತಾ ಕ್ಷಮೆಯನ್ನು ನಿರೀಕ್ಷಿಸುವುದರ ಬಗ್ಗೆ ಹೇಳುವುದಾದರೆ, ಅದು ಶುದ್ಧ ಅಜ್ಞಾನ ಮತ್ತು ಭ್ರಮೆಯಾಗಿದೆ."

ನಿಮ್ಮ ಮನಸ್ಸು ಮತ್ತು ನಿಮ್ಮ ನಾಲಿಗೆಯಿಂದ ಜೊತೆಯಾಗಿ ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸಲು ಪ್ರೋತ್ಸಾಹಿಸಲಾಗಿದೆ. ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಸ್ಮರಿಸುವುದು ಎಂದರೆ ಅಲ್ಲಾಹನನ್ನು ಭಯಪಡುವುದು, ಅವನ ಮಹಾನತೆಯನ್ನು ಮತ್ತು ಅವನ ಹಕ್ಕುಗಳನ್ನು ಸ್ಮರಿಸುವುದು, ಅವನ ಬಗ್ಗೆ ನಿರೀಕ್ಷೆಯಿಟ್ಟುಕೊಳ್ಳುವುದು, ಅವನನ್ನು ವೈಭವೀಕರಿಸುವುದು, ಅವನನ್ನು ಪ್ರೀತಿಸುವುದು, ಅವನ ಬಗ್ಗೆ ಉತ್ತಮ ಭಾವನೆಯನ್ನು ಇಟ್ಟುಕೊಳ್ಳುವುದು ಮತ್ತು ಅವನಿಗಾಗಿ ಮಾತ್ರ ಕರ್ಮವೆಸಗುವುದು. ನಾಲಗೆಯಿಂದ ಸ್ಮರಿಸುವುದು ಎಂದರೆ, ಸುಬ್‌ಹಾನಲ್ಲಾಹ್, ಅಲ್‌ಹಂದುಲಿಲ್ಲಾಹ್, ಲಾಇಲಾಹ ಇಲ್ಲಲ್ಲಾಹ್, ಅಲ್ಲಾಹು ಅಕ್ಬರ್, ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್ ಎಂದು ಹೇಳುವುದು.

ಇಬ್ನ್ ಅಬೂ ಜಮ್ರಾ ಹೇಳಿದರು: “ಯಾರು ಭಯಭೀತನಾಗಿರುವಾಗ ಅವನನ್ನು ನೆನಪಿಸಿಕೊಳ್ಳುತ್ತಾನೋ, ಅವನಿಗೆ ಅವನು ಸುರಕ್ಷತೆಯನ್ನು ದಯಪಾಲಿಸುತ್ತಾನೆ, ಅಥವಾ ಯಾರು ಒಂಟಿಯಾಗಿರುವಾಗ ಅವನನ್ನು ನೆನಪಿಸಿಕೊಳ್ಳುತ್ತಾನೋ, ಅವನಿಗೆ ಅವನು ಸಮಾಧಾನವನ್ನು ನೀಡುತ್ತಾನೆ.

ಶಿಬ್ರ್ (ಗೇಣು) ಎಂದರೆ, ಅಂಗೈಯನ್ನು ಅಗಲಿಸಿದಾಗ ಕಿರುಬೆರಳಿನ ತುದಿಯಿಂದ ಹೆಬ್ಬೆರಳಿನ ತುದಿಯವರೆಗಿನ ಅಂತರ. ಧಿರಾಅ್ (ಮೊಳಕೈ) ಎಂದರೆ, ಮಧ್ಯದ ಬೆರಳಿನ ತುದಿಯಿಂದ ಮೊಣಕೈ ಮೂಳೆಯವರೆಗಿನ ಅಂತರ. ಬಾಅ್ (ಬಾವು) ಎಂದರೆ, ಒಬ್ಬ ವ್ಯಕ್ತಿಯ ಎರಡುಕೈಗಳು, ತೋಳುಗಳು ಮತ್ತು ಅವನ ಎದೆಯ ಅಗಲ. ಅದು ಸುಮಾರು ನಾಲ್ಕು ಮೊಳಕೈಗಳಾಗಿವೆ.

التصنيفات

Oneness of Allah's Names and Attributes, Benefits of Remembering Allah